
ತಂತಿ ಬೇಲಿ
- VinuVeda
- Sep 7, 2021
- 1 min read
Updated: Dec 19, 2021
ತಂತಿ ಬೇಲಿ
ಅವಳ ಬಾಳೇನು ಸುಳ್ಳೆ?
ಕೊಳ್ಳೆ ಹೊಡೆವ ಖುಷಿಯ ಭಂಡಾರ ಆಕೆ
ಕೊಳ್ಳೆಯಾದ ಮೇಲೆ ಭೂಮಿಗೆ ಭಾರ ಆಕೆ
ಓ ಮರ್ಯಾದೆಯೆ
ಎಲ್ಲಿ ಹಾಕಲಿ ತಂತಿ ಬೇಲಿ?
ನನ್ನ ಬದುಕಿಗೋ? ನಿನ್ನದಕ್ಕೋ!?
ಆಕೆ ಕಣ್ಬಿಟ್ಟಾಗಲೆ ಕಾದಿತ್ತು
ಕರಾಳ ಲೋಕದ ಕಟು ಸತ್ಯಗಳು
ಕಲ್ಪನೆಗೂ ಮೀರಿದ ಬದುಕ ವೈಚಿತ್ರ್ಯಗಳು
ಸಹನೆಗೂ ಮೀರಿದ ಅಸಹನೀಯ ಏದುಸಿರು
ನಿಟ್ಟುಸಿರು ತಟ್ಟಲಾರದಾರಿಗೂ ಕೇಳು
ಕಾರಣ ಹುಟ್ಟಿದ್ದೆ ಅವಳ ತಪ್ಪು
ಬದುಕ ಹಸನ ಮಾಡುವಾಕೆಗೆ ತಾಳ್ಮೆಯಿಲ್ಲ
ದಾರಿ ತೋರುವಾತಗೆ ದಿಕ್ಕಿಲ್ಲ
ಗುರುವಿಗೂ ಬಿಗುತನ ಪರದೇಸಿ ನೀನೆಂದು...
ಅಂಬೆಗಾಲಿಗೆ ಅಡಕುತೊಡಕು
ಬಾಲ್ಯವೋ ಕಾಮುಕರ
ಭಯವೋ ಕಂಡವರಾರು!
ಹದಿಹರೆಯಕ್ಕದೋ ಜರ್ಝರಿತ ಹೃದಯ
ಯೌವನಕ್ಕೆ ಮುಖದ ತುಂಬ
ಅನುಭವದ ಸಿಕ್ಕು
ತಲೆನರೆವ ಸದ್ದಿಗದೋ ಮತ್ತೊಮ್ಮೆ
ಮೂಡುವ ಆಸೆಯೂ ಮುರುಟಿದೆ
ಎಲ್ಲರನ್ನು ಒಮ್ಮೆ ಕೇಳಿ ನೋಡ
ಎಲ್ಲಿ ಹಾಕಲಿ ತಂತಿ ಬೇಲಿ?
ನನ್ನ ಬದುಕಿಗೋ
ನಿನ್ನದಕ್ಕೊ?!
ಅಯ್ಯೋ ಹೆಣ್ಣೆ
ಹುಟ್ಟುತ್ತಲೆ ಹೆತ್ತವರೆಂದರು
ಪರರ ಸೊತ್ತಾಗುವಂಥದ್ದು
ಅಯ್ಯೋ ಹೆಣ್ಣೆ!
ಆಡುತ್ತ ಸಹಚರನೆಂದ
ಬಲವೆಲ್ಲಿದೆ ಆಡಲು?
ಅಯ್ಯೋ ಹೆಣ್ಣೆ?
ಓದುತ್ತ ಹೆರವರಂದರು
ಓದಾದಮೇಲೆ ಮದುವೆ ಅಷ್ಟೆ
ಅಯ್ಯೋ ಹೆಣ್ಣೆ!!
ಕೈಹಿಡದ ಸಖನೆಂದ
ನಿನಗೇನು ತಿಳಿಯುವುದು?
ಹೆಣ್ಣೊಂದ ಹೆರು
ಅಯ್ಯೋ ಹೆಣ್ಣೆ!!!??
ಇದು ಜೀವನ!

PC : Twitter handle @estot
✍🏻ವಿನುವೇದ
Comments