
ಅವಕಾಶ
- VinuVeda
- Jun 25, 2023
- 1 min read
ಮತ್ತೊಮ್ಮೆ ಮಗುವಾಗ ಬೇಕು ಸಿಗಬಹುದೇ ಅವಕಾಶ
ಮತ್ತೊಮ್ಮೆ ನನ್ನ ನಾನೆ ತಿದ್ದಿ ತೀಡಬೇಕು
ಮತ್ತೊಮ್ಮೆ ನನಗೆ ನಾನೆ ತಾಯಾಗಬೇಕು
ನನ್ನ ನಾನೆ ಪ್ರೀತಿಸಬೇಕು
ಇಟ್ಟ ತಪ್ಪು ಹೆಜ್ಜೆಗಳ ಹಿಂತೆಗೆದು ನಡೆಯಬೇಕು ಸರಿದಾರಿಯಲಿ
ಇನ್ಯಾವತ್ತು ನನಗೇ ನೋವಾಗದಂತೆ
ನನ್ನ ನಾನೆ ಪ್ರೀತಿಸಬೇಕು
ನೋವು ಕೊಟ್ಟವರ ಕ್ಷಮಿಸಬೇಕು ಒಮ್ಮೆ
ಹೊರಗಿಡಬೇಕು ಒಂದಷ್ಟು ಜನರನ್ನು
ಮತ್ತೊಮ್ಮೆ ನನ್ನ ನಾನೆ ತಿದ್ದಿ ತೀಡಬೇಕು
ತಾಯಾಗಬೇಕು ನನಗೆ ನಾನೆ
ಸಿಗಬಹುದೆ ಅವಕಾಶ!
ಮಾಯೆ ಏನಿಲ್ಲ
ದೇವರಂತೂ ಕಾಣಲ್ಲ
ದೃಷ್ಟಿ ಹಾದಷ್ಟೂ ದೂರ ಎಲ್ಲರ ಮುಖದಲ್ಲೂ ನೋವಿನದ್ದೊಂದು ಗೀರು
ನಗುವೇನೋ ಸಾಂಕ್ರಾಮಿಕ
ಒಮ್ಮೆ ಬಂದರೆ ಮರುಕ್ಷಣಕ್ಕೆ ಸಾವಿನ ಸೂತಕ!
ಸಿಗಬಹುದೆ ಇನ್ನೊಂದು ಅವಕಾಶ
ಜಿಗಿದಷ್ಟೆತ್ತರವೆ ಕೊನೆಯಲ್ಲ ಮನಸಿಗಿದರ ಅರಿವಿಲ್ಲ
ಕ್ಷಣಿಕ ಖುಷಿಗಳೆ ನಿಜವೆನ್ನುವ ಮೂರ್ಖ ಮನಸು ಮುಗ್ಧತೆಯಲ್ಲ
ಈ ಕ್ಷಣವೆಲ್ಲ ಚಿಂತೆ ಇನ್ನೊಮ್ಮೆ ಸಿಗದ ಸಮಯದ ಅರಿವಿಲ್ಲ
ಸಿಗಬಹುದೆ ಅವಕಾಶ
✍🏻ವಿನುವೇದ
Comentários