ಕಳೆದ ಕನಸು
- VinuVeda
- May 22, 2018
- 1 min read
Updated: Dec 19, 2021
ಅವನಪ್ಪುಗೆಯಲವಳ ಮುಖದಲ್ಲಿ ಮುಗುಳು ನಗೆ ಒಡಲಾಳದಲ್ಲಿ ಮತ್ತವನ ನೆನಪಾಗಿ ತೆಳುನಗೆ ಅವನ ನೆನಪಿಗಳುವುದೋ ಇವನಾಸೆರೆಗೆ ಕರಗುವುದೋ ಹೆತ್ತಬ್ಬೆಗೆ ಈ ದಿನ ವಿವರಿಸುವಂತಿದ್ದರೆ ಚೆನ್ನಿತ್ತೆನಿಸಾಕೆ ತವರಿಗೆ ಹೊರಟರೆ ಜವರನ ಮೆತ್ತೆಯಲಿ ಮಲಗಿದಬ್ಬೆ ಕಾಲ್ಗಜ್ಜೆಯೊಂದ ಕೈಗಿಟ್ಟು ಮೆಲ್ಲನುಸುರಿದಳು ನಿನ್ನಂತೆಯೆ ನನ್ನದೂ ಒಂದು ಕನಸು ಕಳೆದಿದೆಯೆಂದು..

ಅವನ ಗೆಲುವು
ಅರಳುತಿದೆ ಹೊಸ ಅನುಬಂಧ ಅವನ ಬಾಹುಗಳಲಿ ನನ್ನ ಮನದಲ್ಲಿ ನಮ್ಮನೆ ಎದುರಿನ ರಂಗೋಲಿಯಲ್ಲಿ ರಾಮನ ಎದುರಲ್ಲಿ ಸೀತೆಯ ನಂಬಿಕೆಯಲ್ಲಿ
ಅವನ ಸೋಲು
ಅವನಿಟ್ಟ ಚುಕ್ಕಿಗಳಲಿ ರಂಗೋಲಿ ಮೂಡಲಿಲ್ಲ ಅವಳೆಳೆದ ಆಳವಾದ ಗೆರೆಗಳು ಅವನೆದೆಯ ಸೀಳಲಿಲ್ಲ ಸೋತದ್ದು ಕಡೆಗೂ ಅವನೆ ಅವನಿಟ್ಟ ಚುಕ್ಕಿಗಳಲಿ ರಂಗೋಲಿ ಮೂಡಲಿಲ್ಲ ರಂಗೋಲಿ ಮೂಡಲಿಲ್ಲ
ರಾಮ, ರಾವಣ ಮತ್ತು ಸೀತೆ ರಾಮ ಹುಟ್ಟಿದಾಗ ಜಗತ್ತಿಗೆ ತಿಳಿದಿರಲಿಲ್ಲ ರಾವಣನಿದ್ದಾನೆಂದು ಸೀತೆ ಹುಟ್ಟಿದಾಗ ರಾವಣನಿಗೆ ತಿಳಿದಿರಲಿಲ್ಲ ರಾಮನಿದ್ದಾನೆಂದು ಮಾತು ರಾಮನದ್ದಲ್ಲ ಸೀತೆಯದ್ದಲ್ಲ, ನಿಯತ್ತಿದ್ದು.
ಅನ್ಯಾಯದ ಸಾವು
ಅವಳಿಂದಾದುಳಿಪೆಟ್ಟು ಎನ್ನ ಶಿಲೆಯಾಗಿಸಿಲ್ಲ ಎನ್ನೊಂದೇಟು ಅವಳೆರಡಾಗಿಸಿತಲ್ಲ ಈ ಸಾವು ನ್ಯಾಯವೇ
ಕಳ್ಳ ಸಂಬಂಧ
ಕವಿತೆಗೂ ಕವಿಗೂ ಹುಟ್ಟಾ ಕಳ್ಳ ಸಂಬಂಧ ಹೊತ್ತು ಗೊತ್ತು ಕವಿಗೂ ಇಲ್ಲ ಕವಿತೆಗಂತೂ ಮೊದಲೇ ಇಲ್ಲ
ಮಳೆ
ಮಳೆ ಬಂದ ದಿನವೆಲ್ಲ ಮಣ್ಣವಾಸನೆ ನೀ ಬಂದ ದಿನವೆಲ್ಲಾ ಇಹದ ವಾಸನೆ ನಾ ಮರುಳೋ ದೇಹ ಮರುಳೋ ವಾಸ್ತವ ಮರುಳೋ
ಮತ್ತೊಮ್ಮೆ ಮಳೆ
ಮಳೆ ಮತ್ತು ಅಮ್ಮ ಮಾಡಿದ ಕುಚುಲಕ್ಕಿ ಗಂಜಿ, ಮಾವಿನಕಾಯಿ ಉಪ್ಪಿನಕಾಯಿ, ಎಣ್ಣೆಲಿ ಕರಿದ ಮಜ್ಜಿಗೆ ಮೆಣಸು ಅಪ್ಪನ ಕಥೆಗಳು, ಮಾಡಿಂದ ಸೋರುವ ಮಳೆ ಸದ್ದು ಮುಸ್ಸಂಜೆ ಬೆಳಕು ಮೂರನೇ ಕ್ಲಾಸಿನ ಕುಸುಮ ಟೀಚರ್ ಕೊಟ್ಟ ಭಾಗಾಕಾರದ ಮನೆಕೆಲಸ, ಹಾಗೂ ಕನ್ನಡ ಪಾಠದ ದ್ವೀಪ ಪಾಠ. ಇದಿಷ್ಟೇ ನೆನಪಾಗಿದ್ದು ಮಳೆಗೆ

ಮಳೆ
ಮಳೆ ಬಂದಾಗಲೆಲ್ಲ ಯಾಕಿದು ಇಷ್ಟು ಅಪ್ಯಾಯ ಅಂದುಕೊಳ್ಳುತ್ತಿದ್ದೆ ಈಗ ತಿಳಿಯಿತು ಮಳೆಯೇ ನನ್ನ ಗೆಳೆಯ ನಾನೊಂಟಿಯಾದಾಗೆಲ್ಲ ಮಳೆರಾಯ ಬರುವನು... ಇಳೆ ಬೀರುವ ವಾಸನೆ ನಮ್ಮ ಪ್ರೇಮದ ಸೂಚನೆ...
ಅವನ ಸಹಿ
ಅವನ ಪ್ರತಿಯುಸಿರಿಗೂ ಕೊರಡು ಕೊನರಿಸುವ ಶಕ್ತಿಯಿದೆ ಅವನಪ್ಪುಗೆಗೆ ಮಾಯಕದ ಕಳೆಯಿದೆ ಅವನೆದೆಯ ಆಳದಲ್ಲಿ ಪ್ರೀತಿಯ ತಂಪಿದೆ ಅವ ಹಿಡಿದ ಬೊಗಸೆಯಲಿ ನನ್ನಾಸೆಯ ಕೊಳವಿದೆ ಬೆಂದುಹೋದ ಬದುಕಲಿ ಅವನದೇ ಒಂದು ಸಹಿ ಇದೆ
Picture : Srikanth Raje & Yash Reddy
✍🏻ವಿನುವೇದ
Commentaires