
ಜೈನಾಬಿಯ ಬಡ ಅಮೀರ
- VinuVeda
- Dec 12, 2021
- 4 min read
ಚೊಂಯ್ಯ್..... ಎಂಬ ಸದ್ದಿನೊಂದಿಗೆ ಜೈನಾಬಿ ಎರಡು ಬಂಗುಡೆ ಮೀನನ್ನು ಹುರಿಯ ತೊಡಗಿದಳು... ರಾತ್ರಿಗಿನ್ನೆರಡು ಹುರಿದರೆ ಸಾಕು, ಹೊರಗೆ ಹೋಗಿ ಗಫರ್ ಸಾಬರ ಅಂಗಡಿಯಿಂದ ದಿನಸಿ ತರುವ ಕೆಲಸವೊಂದು ಬಾಕಿಯಿತ್ತು. ಮಳೆಯ ಆರ್ಭಟವೇನು ಕಮ್ಮಿಯೆ? ಈ ಮಳೆಗೆ ದಿನಸಿ ಇರಲಿ ಹೊರಗೆ ಹೋಗಿ ಉಚ್ಚೆ ಹೊಯ್ಯುವುದಕ್ಕೂ ಮನಸ್ಸುಬಾರದು.
ನಿಖಾ ಮೊದಲು ಜೈನಾಬಿ ಇನ್ನೂ ಸುಂದರ ಯುವತಿ ಬೆಳ್ಳನೆ ಬಣ್ಣ, ನೀಳಗಪ್ಪು ಗುಂಗುರು ಕೂದಲು, ಕೆಂಪು ತುಟಿ, ಬಟ್ಟಲು ಕಣ್ಣು, ಮಟ್ಟಸವಾದ ದೇಹ ಸೌಂದರ್ಯಕ್ಕೆ ತಕ್ಕಂತಹ ಹದವಾದ ಎತ್ತರ ಮೇಲಾಗಿ ಇಂಪಾದ ದನಿ. ತಾಯಿ ವಹೀದ ಯಾವಾಗಲೂ ಹೇಳುವಂತೆ ರಾಜಕುಮಾರನಂತಹ ಪತಿಯೇ ಸಿಕ್ಕಿದ್ದ. ಉಮರುಲ್ಲ ಫಾರುಕ್ ಹೆಚ್ಚಿನ ದೂರದ ಸಂಬಂಧವೇನಲ್ಲ ತಾಯಿಯ ತಮ್ಮನೆ. ಮದುವೆಗೆ ಮೊದಲು ತಾಯಿ ಮನೆಯಲ್ಲಿನ ೧೩ ಮಕ್ಕಳಲ್ಲಿ ೬ ನೆಯವಳಾದ ಜೈನಾಬಿಗೆ ಶಾಲೆ ವಿದ್ಯೆಯ ಮಾತು ದೂರವೆ ಆಗೆಲ್ಲ ಮದರಸಾ ಕಡೆ ಹೋಗುವುದು ಕಷ್ಟವೆ ಅಷ್ಟು ದೂರ ಹೆಣ್ಮಕ್ಕಳನ್ನು ಕಳಿಸುವುದಕ್ಕೆ ಧೈರ್ಯವೆಲ್ಲಿ? ಆದರೂ ಜೈನಾಬಿ ಅಜ್ಜ ಕರೀಂ ಸಾಬರ ದಯೆಯಿಂದ ತಮ್ಮ ಧರ್ಮ ಗ್ರಂಥ ಖುರಾನ್ ಪಠಿಸಬಲ್ಲಳು
ಅಮ್ಮೀ ... ಅಮ್ಮೀ... ಮಂಜೆ ಖಾನೆದೊ... ಮಗ ಅಮೀರನ ಧನಿ ಜೈನಾಬಿಯನ್ನು ತಟ್ಟಿ ಎಬ್ಬಿಸಿತು ಆಗಲೇ ಗಂಟೆ ಒಂದಾಯಿತು ಇನ್ನೀ ಮಗನ ಹಸಿವು ತಣಿಸಿದರೆ ಅರ್ಧ ದಿನದ ಕೆಲಸ ನೀಗಿದಂತೆ ಎಂದೆದ್ದು ಹೊರ ಬಂದಳು.
ತಾಯಿನ ತಂದಿತ್ತ ಬಂಗುಡೆ ಫ್ರೈ ತಿಂದು ಕೈ ಚೀಪುತ್ತ ಅಮೀರ್ ವೆಂಕಟೇಶ ಮಾಸ್ತರರು ಹೇಳಿದಂತೆ ವಾರ್ಷಿಕ ಶಾಲಾ ಪ್ರವಾಸ ಫೀಸು ೨೦೦೦ ರುಪಾಯಿ ಕೊಡಬೇಕೆಂದು ನೆನಪು ಮಾಡಿದ ಅಲ್ಲದೆ ತನಗೊಂದು ಹೊಸ ಪ್ಯಾಂಟು ಬಣ್ಣದಂಗಿ ಮತ್ತು ಬೂಟ್ಸು ಬೇಕೆಂದು ಬೇಡಿಕೆ ಬೇರೆ. ಎಲ್ಲಕ್ಕೂ ಹ್ಞೂ ಗುಟ್ಟಿ ಮಗನನ್ನು ಮತ್ತೆ ಶಾಲೆಗಟ್ಟಿದಳು.
ಮಗನ ಹೊಟ್ಟೆ ತುಂಬಿಸಿದ ಜೈನಾಬಿಗೆ ಫೀಸು ಕೇಳಿದ ಮಾಸ್ತರರ ಸುದ್ದಿ ಕೇಳಿ ತಲೆ ಜೇನುಗೂಡಾಗಿತ್ತು. ಉಮರುಲ್ಲ ಎಂದು ಹಣ ಕಳುಹಿಸುವನೋ ಎಂಬ ಚಿಂತೆ ಕಾಡತೊಡಗಿತು. ಇತ್ತೀಚಿನವರೆಗೂ ಅವಳ ಆರ್ಥಿಕ ಪರಿಸ್ಥಿತಿ ಅಷ್ಟೇನು ಹದಗೆಟ್ಟಿರಲಿಲ್ಲ ಆದರೆ ವರ್ಷದಿಂದೀಚೆ ಉಮರಲ್ಲನ ಫೋನು ಬರುವುದು ಕಡಿಮೆಯಾಗಿತ್ತು ಬಂದರೂ ಅಸಕ್ತಿ ಕಡಿಮೆ ಬರಿಯ ಹ್ಞಾ ಹ್ಞು ಗಳಲ್ಲೆ ಹುಂಡಿ ಕಾಸು ಖಾಲಿಯಾಯ್ತೆನ್ನುತ್ತಿದ್ದ.
ತಿಂಗಳು ಎರಡು ತಿಂಗಳಿಗೊಮ್ಮೆ ಮನೆ ಖರ್ಚಿಗೆಂದು ತನಗೆ ಕಳುಹಿಸುವ ಹದಿನೈದು ಸಾವಿರದಲ್ಲಿ ವರ್ಷದಿಂದೀಚೆ ಸಾವಿರ ಸಾವಿರವೇ ಕಡಿಮೆಯಾಗಿ ಒಂಭತ್ತಕ್ಕೆ ಬಂದು ನಿಂತಿತ್ತು. ಫೋನಿಸಿದರೆ ಉದಾಸೀನದಿಂದ ಹೆಂಗಸರಿಗೆ ಏಕೆ ಗಂಡಸಿನ ಸಂಪಾದನೆಯ ಉಸಾಬರಿ ???ಉಪವಾಸ ಮಾಡದಷ್ಟು ಕಳುಹಿಸುವೆ ಗ್ರಹಿಣಿಯಾದವಳು ಸಂಭಾಳಿಸಬೇಕು ಎಂದು ಬಿಡುವನು.
೧೩ ಮಕ್ಕಳಲ್ಲಿ ಒಬ್ಬಳಾದ ಜೈನಾಬಿಗೆ ಬಡತನವೇನೂ ಹೊಸದಲ್ಲ ಆದರೆ ಈಗಿನ ಕಾಲದ ವ್ಯವಸ್ಥೆಗೆ ಈ ಪರಿಸ್ಥಿತಿ ಯಾಕೋ ಸರಿ ಹೊಂದುತ್ತಿಲ್ಲವೆನಿಸಿತವಳಿಗೆ
ಮೊನ್ನೆತಾನೆ ಹಿಂದಿನ ಮನೆಯ ದೂರದ ಸಂಬಂಧಿ ಇಸುಬು ಸಾಹೇಬರು ಉಮರುಲ್ಲನದೊಂದು ಫೋಟೋ ಇದ್ದರೆ ಕೊಡು ಎಂದು ಇಸಗೊಂಡಿದ್ದರು ಇಲ್ಲಿವರೆಗೂ ಎಂದೂ ಮಾತನಾಡಿಸದ ಅವರ ಈಚರ್ಯೆ ಕೊಂಚ ಆಶ್ಚರ್ಯ ಹುಟ್ಟಿಸಿದಾದರೂ ನೆರೆಕರೆಯವರೊಂದಿಗೆ ವೈಮನಸ್ಸೇಕೆ ಗಂಡಸರ ಹಲವು ವ್ಯವಹಾರಗಳಲ್ಲಿ ತಾನೇನು ಹೆಚ್ಚುಗಾರಿಕೆ ತೋರಲಿ ಎಂದು ಯಾವುದಕ್ಕೂ ಇರಲೆಂದು ಗಂಡನಿಗೆ ತಿಳಿಸಿಯೇ ಕೊಟ್ಟಿದ್ದಳು.
ಉಮರುಲ್ಲ ಏನು ಸಾಮಾನ್ಯ ಸುಂದರನಲ್ಲ ಕಟ್ಟುಮಸ್ತಾದ ಆಳು ಹದವಾದ ಎತ್ತರ ತುಸು ಹೆಚ್ಚೇ ಎನಿಸುವ ತಲೆಗೂದಲು ಬುದ್ದಿವಂತ ಮಹಾ ರಸಿಕ ಶಿಖಾಮಣಿ.ಮದುವೆಗೂ ಮೊದಲು ಊರಲ್ಲೆ ಇದ್ದವನು ತನ್ನನ್ನು ನಿಖಾ ಮಾಡಿಕೊಂಡ ಮೇಲೆ ತನ್ನ ತಾಯಿ ಅವನಕ್ಕ ವಹೀದಾಳ ಸಲಹೆಯಂತೆ ದುಬೈಗೆ ಹಾರಿದ್ದ ಅಲ್ಲೇನೋ ಶೇಖುಗಳ ಮನೆಯಲ್ಲಿ ಕೆಲಸವಂತೆ ತಿಂಗಳು ತಿಂಗಳೂ ತನ್ನ ಖರ್ಚಿಗೆ ಹದಿನೈದು ಸಾವಿರ ಕಳುಹಿಸುವುದಲ್ಲದೆ ವರ್ಷಕ್ಕೊಮ್ಮೆ ಬಂದವನು ಮನೆಯ ರಿಪೇರಿ ಖರ್ಚು ಜಮೀನು ಒಡವೆ ತನ್ನ ತಂಗಿಯರ ಮದುವೆ ಇತ್ಯಾದಿ ನೋಡಿಕೊಳ್ಳುವನು.
ದಯಾಳು ಬೇರೆ, ಹೋದ ವರ್ಷ ಬಂದಾಗ ಇಸಬು ಸಾಹೇಬರ ಮಗಳಾದ ಮೆಹರುನ್ನೀಸಳಿಗೂ ಒಂದು ಸೀರೆ ಕೊಡಿಸಿದ್ದ, ಆಕೆಯೋ ಆ ಸೀರೆಯನ್ನುಟ್ಟು ಮೆರದ್ದದ್ದೆ ಮೆರೆದದ್ದು ಮೆಹರುನ್ನೀಸ ಅದ್ಭುತ ಸುಂದರಿ ನೀಲಕಣ್ಣು ಬೇರೆ ಕೇಳಬೇಕೆ ಅವಳ ಸಂಭ್ರಮ?ಈಗ ಇಸುಬು ಸಾಹೇಬರೇನೋ ಮೊನ್ನೆ ಅಂದ ಹಾಗಿತ್ತು ಹುಡುಗ ಹುಡುಕಿದ್ದೇನೆ ಜೈನಾಬಿ ಬೇಸರಿಸಬೇಡ ಎಂದು! ಆಶ್ಚರ್ಯವಾಗಿತ್ತಿವಳಿಗೆ ತಾನೇಕೆ ಬೇಸರಿಸಲಿ ಮುದ್ದು ಹುಡುಗಿ ಚೆನ್ನಾಗಿರಲಿ ಎಂದು.
ಫಳ್ ಫಳಾರ್... ಎಂದು ಹೊಳೆದ ಮಿಂಚಿಗೆ ಜೈನಾಬಿ ಒಮ್ಮೆ ತನ್ನ ಯೋಚನಾ ಲಹರಿಯಿಂದ ಎಚ್ಚೆತ್ತಳು
ದುಬೈಗೆ ಹೋದ ಗಂಡ ವರ್ಷ ಆದಮೇಲೆ ಮೊದಲ ಬಾರಿ ತಿರುಗಿ ಬಂದಾಗ ತನ್ನ ಸ್ಥಿತಿ ಹೇಗಿತ್ತೋ ಹಾಗಿದೆ ಭೂಮಿ ಅವಸ್ಥೆ ಎಂದು ಜೈನಾಬಿ ನಿಟ್ಟಿಸಿರು ಬಿಟ್ಟಳು.
ಅಮೀರನ ಚಡ್ಡಿಯೊಂದು ಒಣಗದೆ ಜೈನಾಬಿಗೀಗ ತಲೆಬಿಸಿ ಸಂಜೆ ಮದರಾಸಗೆ ಹೋಗುವಾಗ ಯಾವ ಬಟ್ಟೆ ಮಗನನ್ನು ಬೆಚ್ಚಗಿಡಬಹುದು ಎಂದು ಚಿಂತಿಸಲಾರಂಭಿಸಿದಳು ಅಷ್ಟರಲ್ಲಿ ಜೈನಾಬಿಯ ಫೋನು ರಿಂಗಣಿಸಿತು ಯಾ ಅಲ್ಲ ಇಂತಹ ಮಳೆಯಲ್ಲು ಈ ಫೋನು ಸರಿಯಾಗಿ ಕೆಲಸ ಮಾಡುತ್ತಿದೆ ಯಾರದಿರಬಹುದಪ್ಪ ಬಹುಶಃ ತಮ್ಮ ಸುಲೈಮಾನನದಿರಬೇಕು ಮಳೆಯಲ್ಲವೇ ಕಲ್ಲುಒಡೆಯುವ ಕೆಲಸ ಮುಗಿಸಿ ನಿನ್ನ ಮನೆಗೆ ಇರಲು ಬರುವೆ ಮಳೆಯ ಕಾರಣ ಮನೆಗೆ ಹೋಗಲಾರೆ ಎಂದು ತಿಳಿಸಲು... ಎತ್ತಿ ಹಲೋ ಎಂದರೆ ಆಕಡೆಯಿಂದ ಉಮರುಲ್ಲ!!! ಇಷ್ಟುಹೊತ್ತಿಗೆಲ್ಲ ಮದುವೆಯಾದ ಸುರುವಿಗೆ ಬಿಟ್ಟರೆ ಎಂದೂ ಕರೆ ಮಾಡಿದವನೆ ಅಲ್ಲ ಎಂದು ಆಶ್ಚರ್ಯದಿಂದ ಕರೆ ಸ್ವೀಕರಿಸಿದವಳಿಗೆ "ಏನು ಫೋನು ಎತ್ತಲು ಕಷ್ಟವೆ !!!" ದಬಾಯಿಸಿದ ಉಮರುಲ್ಲನಿಗೆ ಹೇಗೆ ಸಮಾಧಾನಿಸುವುದೆಂದು ಯೋಚಿಸುತ್ತಿರುವಾಗಲೇ ಉಮರುಲ್ಲ ಹಣ ಕಳಿಸಿದ್ದೇನೆ ಇನ್ನು ಮುಂದೆ ನಿನಗೆ ಏಳು ಸಾವಿರ ಮಾತ್ರ ಕಳುಹಿಸಬಲ್ಲೆ ಖರ್ಚು ಜಾಸ್ತಿಯಾಗಿದೆ ಅಲ್ಲದೆ ಮುಂದಿನ ವಾರವೇ ಊರಿಗೆ ಬರುವವನಿದ್ದೇನೆ ಎಂದ!
ಮಾರನೆ ದಿನ ಮನೆಗೆ ಬಂದ ಸುಲೈಮಾನ ಭಾವ ಬರುವ ಸುದ್ದಿಕೇಳಿ ಅತ್ತರಿಗೆ ಆಸೆ ಪಟ್ಟ ಅಷ್ಟಲ್ಲದೆ ತನ್ನ ಬಹುದಿನದ ಆಸೆಯೊಂದು ಕಮರುತ್ತಿರುವುದು ಕೇಳಿ ಮನಸ್ಸು ಹುಳ್ಳಾಗಿಸಿದ. ಕೊಂಚ ಬೇಸರವಾಗಿತ್ತವನಿಗೆ ಮೆಹರುನ್ನೀಸ ಇನ್ಯಾರದೋ ಬೇಗಂ ಆಗುವಳೆಂಬ ಸುದ್ದಿಗೆ.
ಹಾಗೂ ಹೀಗೂ ಉಮರುಲ್ಲನ ವಿಮಾನ ಬರುವ ದಿನ ಬಂದೇ ಬಿಟ್ಟಿತ್ತು ಜೈನಾಬಿ ಬೆಳಗಿನ ಆಜಾನ್ ಆಗುವ ಮೊದಲೆ ಎದ್ದಿದ್ದಳು ಇನ್ನೇನು ಅಬ್ಬು ಬಂದರೆ ಶಾಲಾಪ್ರವಾಸ ಹೋಗೇಬಿಡುವೆನು ಅದಕ್ಕೆ ಬೇಕಾದ ತಯಾರಿ ಆಗಬೇಕು ಅಮ್ಮಿಯ ಬಳಿಯಿರುವ ಹಳೆಯ ಕೆಂಬಣ್ಣದ ಬ್ಯಾಗಲ್ಲಿ ತನ್ನೊಂದು ಜೋಡಿ ಬಟ್ಟೆ ತುಂಬಬೇಕು ಆಟದ ಗೋಲಿ ಲಗೋರಿ ತುಂಬಬೇಕು ಎಂದು ಲಗುಬಗೆಯಿಂದ ಅಮೀರ ಕೂಡ ಎದ್ದಿದ್ದಾಯ್ತು.
ಅದೇನೋ ಇಸುಬು ಸಾಹೇಬರು ನಿನ್ನೆ ಸಂಜೆ ಬಂದು ಮೆಹರುನ್ನೀಸಾಳ ನಿಖಾಕ್ಕೆ ಬರಲೇ ಬೇಕು ಎಂದು ಒತ್ತಾಯಿಸಿ ಹೋಗಿದ್ದರು ಹಲವು ವರ್ಷಗಳಿಂದ ನೆರೆಕರೆಯವರಾದ ನಮಗೆ ಯಾಕೆ ಈ ರೀತಿಯ ಮಾತುಗಳೋ ಅರ್ಥವಾಗಲಿಲ್ಲವಾದರೂ ಗಂಡ ಬರುವ ಸಂಭ್ರಮದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವ ವ್ಯವಧಾನ ತೋರಲಿಲ್ಲ ಜೈನಾಬಿ!
ಇತ್ತ ಬೆಳ್ಳಂಬೆಳಗ್ಗೆ ಇಸುಬು ಸಾಹೇಬರು ತಮ್ಮ ಹೊಸ ಅಳಿಯನನ್ನು ಎದುರುಗೊಳ್ಳಲು ಬಜಪೆ ಕಡೆ ಕಾರು ಮಾಡಿ ದೌಡಾಯಿಸುವುದು ಕಾಣಿಸಿತು ಇಂದೇಕೋ ತನ್ನ ಗಂಡ ಇವರೊಂದಿಗೆ ಬಾರದಿರಲಿ ಎಂದೆ ಮನಸ್ಸು ಅಲ್ಲಾಹ್ ನಲ್ಲಿ ಪ್ರಾರ್ಥಿಸಿತು. ದ್ವೇಷ ವೈಮನಸ್ಸಿಲ್ಲದಿದ್ದರೂ ಇತ್ತೀಚೆಗೇಕೋ ಮೆಹರುನ್ನೀಸ ಮಾತು ತಪ್ಪಿಸುವುದು ಇಸಬು ಸಾಹೇಬರು ಪ್ರತಿ ಮಾತಿಗೂ ಬೇಸರಿಸಬಾರದು ಎನ್ನುವುದು ಅವರ ಪತ್ನಿ ಮಿಸ್ರಿಯಾ ಬೇಗಂ ಮೌನ ಇತ್ಯಾದಿ ಹೀಗೆ ಪ್ರಾರ್ಥಿಸುವಂತೆ ಮಾಡಿತ್ತು.
ಗಂಡನಿಷ್ಟದ ಬಿರಿಯಾನಿ ಬೇಯಿಸಿದವಳಿಗೆ ಗಂಡ ಬಾರದೆ ನಿಖಾಹ್ ಕ್ಕೆ ಹೋಗುವ ಮನಸ್ಸಿರಲಿಲ್ಲ ಆದರು ಅಮೀರ ಹಾಗೂ ಸುಲೈಮಾನರೊಡಗೂಡಿ ಮನಸ್ಸಿಲ್ಲದ ಮನಸ್ಸಿಂದ ಹೋಗಲೇಬೇಕಾದ್ದರಿಂದ ಹೊರಟಿದ್ದಳು ಪಕ್ಕದ ಮನೆಯೇ ಆದ್ದರಿಂದ ಕಾರು ಬಂದಾಕ್ಷಣ ಓಡಿಬರಬಹುದು ಎಂದುಕೊಂಡಳು.
ತನ್ನದೆ ನಿಖಾಹ್ ಗೆ ಹಾಕಿದ ಕೆಂಬಣ್ಣದ ಲೆಹಂಗ ಅದಕ್ಕೆ ಸರಿಹೊಂದುವ ಒಂದು ಉದ್ದದ ಸರ, ಕಿವಿಗೆ ಕಿವಿಯೋಲೆ ಉಂಗುರ ಇಷ್ಟೆ ಅಲಂಕಾರ ಶಿಸ್ತಾಗಿ ತಲೆಬಾಚಿ ಸೆರಗುಹೊದ್ದವಳು ಮೇಲಿಂದೊಂದು ಬುರುಖಾ ಹಾಕಿ ಹೋದಸಲ ಉಮರುಲ್ಲ ಬಂದಾಗ ತಂದ ಅತ್ತರು ಪೂಸಿ ಸಿದ್ದವಾದಳು. ಬೆಳಗ್ಗೆಯಿಂದ ಮೆಹರುನ್ನೀಸಾಳನ್ನು ನೋಡಿ ಬರುವೆನೆಂಬ ಅಮೀರನನ್ನು ತಡೆಯಲಾಗಲೇ ಇಲ್ಲ ಮಕ್ಕಳಿಗೇನು ಗೊತ್ತು ಶಿಷ್ಟಾಚಾರ? ಹತ್ತಿರದಲ್ಲೆ ಮದುವೆಯಿದ್ದು ತನ್ನೊಬ್ಬಳನ್ನು ತಯಾರಿ ಸಹಾಯಕ್ಕೂ ಕರೆಯದೆ ದೂರವೆ ಇಟ್ಟಿದ್ದ ಮಿಸ್ರಿಯಾ ಬೇಗಂ ಮನಸ್ಸಲ್ಲೇನಿದೆಯೋ ಅಮೀರನಿಗೇಕೋ ಈ ಹಟ ಎಂದು ಒಳಗೊಳಗೇ ಮುಜುಗರಪಟ್ಟಳು ಜೈನಾಬಿ.
ಇಸಬು ಸಾಹೇಬರದ್ದು ಅರಮನೆಯಲ್ಲದಿದ್ದರೂ ತಕ್ಕಮಟ್ಟಿನ ಸ್ಥಿತಿವಂತರು ಅಲ್ಲದೆ ಸಿರಿವಂತಿಕೆ ಪ್ರದರ್ಶನ ಸ್ವಲ್ಪ ಹೆಚ್ಚೆ ಹಾಗಾಗಿ ಎರಡಂತಸ್ಥಿನ ದೊಡ್ಡಮನೆ ಹತ್ತಾರುಕೋಣೆಗಳು ಎರಡು ದೊಡ್ಡ ಹಜಾರ ನೂರು ಜನಕ್ಕೂ ಹೆಚ್ಚು ಜನ ಕೂರಬಹುದಾದ ತಾರಸಿಯಲ್ಲೆರಡು ರಂಗಮಂಚ ತಯಾರು ಮಾಡಿ ನಿಖಾಹ್ ಸಂಭ್ರಮ ನಡೆದಿತ್ತು.
ಮೆಹರುನ್ನೂಸಿಳಾನ್ನು ದುಲ್ಹನ್ ರೂಪದಲ್ಲಿ ಕಾಣಲು ತವಕಿಸಿದ ಅಮೀರ ಯಾವ ಗತಿಯಲ್ಲಿ ಓಡಿದ್ದನೋ ಅದೇ ಗತಿಯಲ್ಲಿ ವಾಪಾಸು ಬಂದನು! ಕಣ್ತುಂಬಿದ್ದ ಮಗನ ಮುದ್ದು ಮುಖ ನೋಡಿ ಆಶ್ಚರ್ಯವಾಯಿತಾದರು ಸಮಾಧಾನ ಪಡಿಸುತ್ತಾ ಕೇಳಿದಳು ಏನಾಯ್ತು ಬೇಟ ಏಕಿಷ್ಟು ಬೇಸರ ? ಕಣ್ತುಂಬಿದ್ದ ಹುಡುಗ ಜೈನಾಬಿಯ ತೆಕ್ಕೆಗೆ ಬಿದ್ದು ಅಬ್ಬು... ಅಲ್ಲಿ ... ಅಬ್ಬು ...ಎಂದು ಬಿಕ್ಕಳಿಸಿದ.
ಅಬ್ಬು ಬರುತ್ತಾರೆ ಮಗ ಇಂದೆ ಬರುವರೆಂದು ಹೇಳಿದ್ದೆನಲ್ಲವೆ?
ಅಬ್ಬು ... ಅಬ್ಬು ... ಅಲ್ಲಿ ... ದುಲ್ಹಾ...
ಮಗನ ಬಿಕ್ಕಳಿಕೆ ಅಳು ಏದುಸಿರು ನೋಡಿ ಏನೋ ಆತಂಕ ಕಾದಿದೆ ಎನ್ನಿಸಿದರೂ ಅಳು ನಿಲ್ಲಿಸದ ಮಗನನ್ನು ಕರೆದುಕೊಂಡ ಸುಲೈಮಾನನೊಡಗೂಡಿ ಮದುವೆ ಮನೆಗೆ ನಡೆದವಳಿಗೆ ಎದೆನಡುಗಿಸುವ ಆಘಾತ ಕಾದಿತ್ತು!!!
ಉಮರುಲ್ಲ ದುಲ್ಹನಾಗಿ ಅಲಂಕರಿತನಾಗಿದ್ದ !!!ಸುಲೈಮಾನನ ಕಣ್ಣಲ್ಲೂ ನೀರು ಭಾವ ತನ್ನ ಕನಸಿನ ಕನ್ಯೆಯೊಂದಿಗೆ ನಿಖಾಹ್ ಮಾಡಿಕೊಳ್ಳುತ್ತಿದ್ದಾನೆ ಯಾ ಅಲ್ಲಾಹ್... ಒಂದು ಚೀತ್ಕಾರ ಹೊರಟಿತವಳ ಧನಿಯಿಂದ ಎಂತಹ ಘೋರ!!!!
ಸುಲೈಮಾನನಿಗೂ ಅತ್ಯಂತ ನೋವು ಆಘಾತವಾಯಿತು ಒಂದು ಕೈಯಲ್ಲಿ ಅಕ್ಕನನ್ನು ಸಾವರಿಸುತ್ತಲೆ ತಪ್ಪಿತಸ್ಥನಂತೆ ನಿಂತಿದ್ದ ಉಮರುಲ್ಲನ ಕೆನ್ನೆಗೊಂದೇಟು ಹೊಡೆದೇ ಬಿಟ್ಟ. ಇಷ್ಟರಲ್ಲೆ ಎದುರು ಬಂದ ಅವರ ಕುಟುಂಬದ ಮುದಿಯನೊಬ್ಬನ ತಲೆಗೆ ಕೈಗೆಸಿಕ್ಕ ಹೂದಾನಿಯೊಂದರಲ್ಲಿ ಬಾರಿಸಿದ!! ಪುಣ್ಯಕ್ಕೆ ಆ ಮುದಿಯ ಸಾಯದೆ ಸಾವರಿಸಿಕೊಂಡ ಸಾಧು ಸ್ವಭಾವದ ಸುಲೈಮಾನನಿಂದ ಈ ನಿರೀಕ್ಷೆಯಿಲ್ಲದ ಅವರೆಲ್ಲರ ಮುಖದಲ್ಲಿ ಭೀತಿಯಿಂದ ಒಟ್ಟಾರೆ ಭಯದ ವಾತಾವರಣ ಆವರಿಸಿತು.
ಹರಾಮ್ ಖೋರ್ ಇಷ್ಟು ವರ್ಷ ಸಂಸಾರ ನಡೆಸಿದ ನನ್ನ ಜೈನು ದೀದಿಗೆ ಇಂತಹ ಅವಮಾನವೆ? ಅದು ಒಡಹುಟ್ಟಿದ ಅಕ್ಕನ ಮಗಳಿಗೆ? ಒಂದು ಮಾತು ಅವಳ ಒಪ್ಪಿಗೆ ಕೇಳಬೇಕಿನ್ನಿಸಲಿಲ್ಲವೇ ನಾಯಿ! ಕಿರುಚಿದ ಸುಲೈಮಾನ!
ಈ ಗಲಾಟೆಯಲ್ಲಿ ಕ್ಷಣದಲ್ಲಿ ಕಣ್ಣಿಗೆ ಕತ್ತಲಾವರಿಸಿದಂತಾದರೂ ನಡು ಮದ್ಯಾಹ್ನವೇ ತನ್ನ ಜೀವನದ ಸೂರ್ಯ ಅಸ್ತಂಗತವಾಗಿದ್ದಲ್ಲದೆ ಬೇರೊಂದುಕಡೆ ಬೆಳಕು ಕೊಡುವ ನಿರ್ಧಾರ ಮಾಡಿದ್ದು ನೋಡಿ ಸಾವರಿಸಿಕೊಳ್ಳಲಾರದೆ ಹೋದಳು ಜೈನಾಬಿ.ಗದ್ಗದಿತ ಕಂಠದಿಂದ ಒಂದೇ ಒಂದು ಉದ್ಘಾರ ಹೊರಟಿತು "ಆಪ್ ಅಚ್ಚ ನಹಿ ಕಿಯಸೋ," "ನಿಮ್ಮ ಈ ನಡತೆಗೆ ಧಿಕ್ಕಾರವಿರಲಿ"
ದಿನವೂ ಅಕ್ಕರೆಯಿಂದ ಮಾತನಾಡಿಸುತ್ತಿದ್ದ ಮಿಸ್ರಿಯಾ ಬೇಗಂಳ ಘನ ಮೌನ, ಇಸಬು ಸಾಹೇಬರು ಮಾತಿಗೊಮ್ಮೆ ಬೇಸರಿಸಬೇಡವೆನ್ನುವ ಹೊಸ ಅಭ್ಯಾಸದ ಹಿಂದಿನ ಗುಟ್ಟು, ಪ್ರತಿ ದಿನದ ಆಜಾನ್ ಎಂಬಂತೆ ತನ್ನನ್ನೊಂದು ಬಾರಿ ಜೈನು ದೀದಿ ಎಂದು ಬಾಯಿತುಂಬ ಮಾತನಾಡಿಸಿ ಅಕ್ಕರೆ ತೋರುತ್ತಿದ್ದ ಮೆಹರುನ್ನೀಸಳ ಇತ್ತೀಚಿನ ಗಂಭೀರತೆಯ ಹಿಂದಿನ ನಿಲುವು ಕ್ಷಣದಲ್ಲಿ ಅರ್ಥವಾಯಿತವಳಿಗೆ.
ಬವಳಿ ಬಂದು ಓಲಾಡುವ ಅಮ್ಮಿ ಹಾಗು ಮಾಮುವಿನೊಂದಿಗೆ ಮೆಲ್ಲನೆ ತಲೆತಗ್ಗಿಸಿ ಮನೆ ಕಡೆಗೆ ಭಾರವಾದ ಮನಸ್ಸಿನೊಂದಿಗೆ ಹೆಜ್ಜೆಹಾಕಿದ್ದ ಅಮೀರ.
ಅಮೀರನಿಗೋ ಮನದ ತುಂಬ ಬೇಸರ ಮನೆಗೆ ಬಂದು ಮುದ್ದಿಸದೆ ಅಬ್ಬುವೇಕೆ ತಮಗೆ ಹೇಳದೆ ಸೀದಾ ಇಲ್ಲಿಗೆ ಬಂದದ್ದು??? ಅಬ್ಬು ಇಂದು ಎಲ್ಲರೊಂದಿಗೆ ಇರುವ ಪರಿ ಹೊಸತೆ!! ಅಮ್ಮಿ ಮಾಡಿದ ಬಿರಿಯಾನಿ ಆರಿದರೆ ಹೇಗೆ ತಿನ್ನುವುದು ಅಬ್ಬು ಬಂದರೆ ಬೇಗ ತಿನ್ನಬಹುದಿತ್ತು! ತನ್ನ ಕಂಡೊಡನೆ ಮೇರೆ ಪ್ಯಾರೆ ಎಂದು ಬಾಚಿತಬ್ಬಿ ಮುತ್ತಿನ ಮಳೆಗರೆಯುತ್ತಿದ್ದ ಅಬ್ಬು ಇಂದು ಅಪರಿಚಿತನಂತೆ ಹಚಾ ಎಂದು ದೂರ ತಳ್ಳಿದನೇಕೆ? ಮಾವನೇಕೆ ಇಷ್ಟು ಕೋಪ ಮಾಡಿಕೊಂಡ! ಅಬ್ಬುವಿಗೆ ಹೊಡೆಯಬಹುದೆ?
ಇತ್ಯಾದಿ ಪ್ರಶ್ನೆಗಳಿಗೆ ಉತ್ತರವಿಲ್ಲದ್ದರೂ ಒಂದು ಮಾತು ಚೆನ್ನಾಗಿ ಅರ್ಥವಾಗಿತ್ತು ಅಮೀರನಿಗೆ, ಇಷ್ಟೆಲ್ಲ ಹೊಡಿಬಡಿ ಜಗಳವಾದಮೇಲೆ ಅಮ್ಮಿ ಮಾಮು ಬೇಸರಗೊಂಡಮೇಲೆ ನಾಡಿದ್ದಿನ ಪ್ರವಾಸಕ್ಕೆ ಕಾಸು ಕೊಡುವವರು ದಿಕ್ಕಿಲ್ಲ ಹೆಸರಿಗೆ ತಕ್ಕಂತೆ ಅಮೀರನಾಗಬೇಕಾದವನು ಇಂದು ಗರೀಬ ಎಂದರಿವಾಗಿ ಪಿಚ್ಚೆನಿಸಿತು.
✍🏻ವಿನುವೇದ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
Comments