
ಅವನು
- VinuVeda
- Dec 19, 2021
- 1 min read
Updated: Dec 24, 2021
ಹೋತದ ಗಡ್ಡ
ಅವನ ಕೈಬೆರಳು ಸೋಕಿದಾ ಕ್ಷಣ
ಮರೆತೆನು ನನ್ನೆ ನಾ
ಬಂಧನಗಳ ಹಂಗೇಕೆ
ಅವನಲ್ಲಿ ನಾ ನನ್ನಲ್ಲಿ ಅವ
ಮನಸ ಕದ್ದು
ಖೈದಿಯಾಗಿರುವಾಗ...
ಜಿಗುರುಬೆರಳ ಸ್ಪರ್ಶಕ್ಕೆ
ಹೋತದ ಗಡ್ಡಕ್ಕೆ ಕಚಗಳಿಯಾಗಿರುವಾಗ
ಬಂಧನದ ಹಂಗೇಕೆ...
ಬೇಕಾಗಿದೆ
ಅಳಲೊಂದು ಹೆಗಲು ಬೇಕಿದೆ,
ಹೆಗಲ ಮುತ್ತಿಕ್ಕಿಹೋದ ಚಂದ್ರಮನಿಗೊಂದು
ವಿದಾಯ ಹೇಳಬೇಕಿದೆ,
ಮನಸ ಚುಚ್ಚಿದ ಆಯುಧವೊಂದ ಕೊಚ್ಚಿ ಕೊಲ್ಲಬೇಕಿದೆ,
ಚೊಚ್ಚಲ ಹೆರಿಗೆಗಿಂತ ಹೆಚ್ಚು ನೋವೆನಿಸುವ
ಹುಚ್ಚು ಪ್ರೇಮದ ನೋವ ಮರೆಯಲು
ಅಚ್ಚು ಮೆಚ್ಚಾದ ಜೀವದಾಸರೆ ಬೇಕಿದೆ,
ಬೆಚ್ಚಗಾಗುತ್ತಿರುವ ಹೃದಯದಲ್ಲಿ
ಕಳೆದು ಹೋದವನ ಹೆಸರಲೊಂದು
ಹಚ್ಚೆ ಬರೆಯಬೇಕಿದೆ.
ಜಗವೆ ಸಂತೆ
ಅವನೆದೆಯ ಬಡಿತ
ಅಮ್ಮನಂತೆ
ಅವನ ಕಪಿಕೆಲಸ ಸಹೋದರನಂತೆ
ಅವನ ರಕ್ಷೆ ಅಪ್ಪನಂತೆ
ನನ್ನೆಲ್ಲ ಮಾತಿಗವನು ತಲೆದೂಗುವಾಗ ಸಹೋದರಿಯಂತೆ
ಸಲಹೆ ನೀಡಲವನು ಗುರುವಂತೆ
ಮುದ್ದುಗರೆಯುವಾಗ ಸಖನಂತೆ
ಅವನೇ ಜಗತ್ತಾಗಿ ನಿಂತಿರುವಾಗ ಇನ್ಯಾಕೆ ಬೇಕು ಈ ಸಂತೆ
ಅವನ ರಾಕ್ಷಸಿ
ಯಾಕೋ ಅವನ ಮೇಲೆ ಕೋಪ
ಅದೇಕೋ ಏನೋ ತೋರಿರುವೆ ಬರಿಯ ಸಿಟ್ಟಿನ
ತಾಪ
ಸರಿಯೋ ತಪ್ಪೋ
ಯಾವುದು ಒಪ್ಪದ ನಾನು, ಹಾಗು ನನ್ನೊಳಗಿನ ರಾಕ್ಷಸಿ...
ದೂರ ಸರಿದವನು
ಮತ್ತೆ ಬಾರದಂತೆ ದೂರ ಸರಿದು
ಹಿಂತಿರುಗಿ ನೋಡಿದಾಗ
ಕಳೆದ ದಿನಗಳ ನೆನಪಾಯ್ತು
ಕಣ್ಣಂಚಲಿಳಿದ ಹನಿ ಒರೆಸಲು
ಅವನ ಕೈಗಳಿಲ್ಲ
ಮತ್ತೆಂದೂ ಬಾರದೂರಿಗೆ ಪಯಣಿಸಿದವನು
ಗುಂಗಾಗಿ ಕಾಡಿದಾಗ ಜೀವ ಹಿಂಡಿದಂತಾಯ್ತು
ನೋವೆಂದು ಅತ್ತಾಗ ಒರಗಲು
ಅವನ ಹೆಗಲಿಲ್ಲ
ಕತ್ತಲಲ್ಲಿ ತಡಕಾಡುವಾಗ ಕೈಹಿಡಿದು
ಬೆಳಕೆಡೆಗೆ ನಡೆಸಿದಾಗ
ನನ್ನೆ ನಾನು ಮರೆತಂತಾಯ್ತು
ಮುಸ್ಸಂಜೆಯ ಬೇಸರ ನೀಗಲು
ಅವನ ಮಾತಿಲ್ಲ
ಯಾರದೋ ಮೇಲಿನ ಕೋಪಕ್ಕೆ
ಇನ್ಯಾರದೋ ಮೇಲಿನ ಸಿಟ್ಟಿಗೆ
ಕಂಪಿಸಿದಾಗ ಭಯವಾಯ್ತು
ರಾಗದ್ವೇಷಗಳ ಲೆಕ್ಕ ಹೇಳಲು
ಅವನ ವಾದವಿಲ್ಲ
✍🏻ವಿನುವೇದ
Comments