
ಟ್ವಿಟರ್
- VinuVeda
- Jun 20, 2021
- 1 min read
Updated: Aug 21, 2021
ಸಾಮಾಜಿಕ ಜಾಲತಾಣಗಳೆಲ್ಲ ಅತ್ಯಂತ ಸುರಕ್ಷಿತ ಹಾಗು ಉಪಯೋಗಕರವಾದ ತಾಣವೊಂದಿದ್ದರೆ ಅದು ಟ್ವಿಟರ್ ಮಾತ್ರ. ಇಲ್ಲಿ ಕೇಳುವ ಹಲವು ಟುವ್ವಿಗಳು ಬಹಳ ಪರಿಣಾಮಕಾರಿಯಾಗಿದೆ.
ಕೆಲವು ಟ್ವಿಟರ್ ಹ್ಯಾಂಡ್ಗಳ ಹೆಸರು ನವಿರು ಹಾಸ್ಯದಿಂದಿದ್ದು ಹೆಸರೇ ಸಣ್ಣದೊಂದು ಖುಷಿಕೊಡುತ್ತದೆ, ಕೆಲವೋ ಹಾಸ್ಯಾಸ್ಪದವಾಗಿರುತ್ತದೆ. ಕೆಲವೊಂದು ನಿಘಂಟು ಹುಡುಕುವಂತೆ ಮಾಡಿದರೆ ಇನ್ಕೆಲವು ಬಾಯಲ್ಲಿ ನೀರೂರಿಸುವಂತಹವು ಮತ್ತೆ ಕೆಲವಕ್ಕೆ ಚಿನ್ಹೆಗಳೇ ಹೆಸರು, ಕೆಲವೊಂದು ಅಕೌಂಟ್ಗಳು ವಿಮರ್ಶಾತ್ಮಕವಾಗಿದ್ದರೆ ಕೆಲವು ತರ್ಕಕ್ಕೆ ನಿಲುಕದವು, ಇನ್ಕೆಲವು ತರ್ಕವೇ ಇಲ್ಲದಂತವು. ಆಧ್ಯಾತ್ಮದಲ್ಲಿ ಕಳೆದು ಹೋಗಲು,ರಾಜಕೀಯ ತಿಳಿದುಕೊಳ್ಳಲು,ಇತಿಹಾಸ ಕೆದಕಲು ಇದೊಂದು ಸುಂದರ ವೇದಿಕೆ.
ಅಷ್ಟೆ ಯಾಕೆ ಇಲ್ಲಿ ಹಲವರ ಬಣ್ಣ ಬಯಲಾಗುವುದೂ ಇದೆ.ಇಲ್ಲಿ ವಾರ್ ಫೈಟ್ಗಳಂತೂ ಮಾಮೂಲಿ, ಹಳಬರು ಹೊಸಬರು ಇಲ್ಲಿ ಎಲ್ಲರೂ ಒಂದೆ.ಕೆಲವರ ದ್ರಾಷ್ಟ್ಯಕ್ಕೆ ಸಿಲುಕಿ ಎಷ್ಟೋ ಜನರ ಮರ್ಯಾದೆಗೇಡು. ಸಹಾಯಕ್ಕಿಳಿವವರು ಇಲ್ಲಿ ದೈವಸಮಾನರು. ಮುಗ್ಧರು ಚೂರು ಯಾಮಾರಿದರೂ ಸಾಕು ಕಾದು ಕುಳಿತಿರುವ ಟ್ರೋಲಿಗರಿಗೆ ಆಹುತಿ. ಇಲ್ಲಿರುವ ಪ್ರತಿಯೊಬ್ಬರೂ ಈ ಟ್ವಿಟರ್ ಅಂಗಳದ ಸದಸ್ಯರೇ.
ತರ್ಕ ಹಾಗೂ ಅಭಿಪ್ರಾಯಗಳ ಭಿನ್ನತೆಯನ್ನು ವೈಯಕ್ತಿಕ ದ್ವೇಷಕ್ಕೆ ಬಳಸುವವರಿಗಂತೂ ಇಲ್ಲಿ ಕಮ್ಮಿ ಇಲ್ಲ. ಜ್ಞಾನಿಗಳೆನಿಸಿಕೊಂಡವರ ಅಜ್ಞಾನ,ಅಪಾರ ಅಜ್ಞಾನಿಗಳೆನಿಸಿಕೊಂಡವರೊ ತಮ್ಮ ಗುಟ್ಟು ಬಿಡದವರು. ಇಲ್ಲಿಯೂ ಇರುವರು ಕೆಲ ಹೆಣ್ಣುಬಾಕರು ಪುರುಸೊತ್ತಲ್ಲಿ ಊಟವಾಯ್ತ,ತಿಂಡಿಯಾಯ್ತ ಬನ್ನಿ ಸಿಗೋಣ ಫೋನ್ ನಂಬರ್ ಕೊಡಿ ಅನ್ನುವವರು.ಇದು ಒಳ್ಳೆಯ ಸ್ನೇಹಿತರಾಗಲೂ ಒಂದು ವೇದಿಕೆಯೂ ಹೌದು.
ಹಾಕಿದ ಡಿಪಿ ನಮಗೆ ಕಾಣದಿದ್ದರೂ ಇವರಿಗೆ ಕಣ್ಣು ಪ್ರಿಯ,ಮೂಗು ನೀಳವೆನಿಸುತ್ತದೆ. ಆರಕ್ಷಕರಂತೂ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇನ್ನು ಆಪತ್ಕಾಲಕ್ಕೆ ಎಷ್ಟೋ ಜನರ ಜೀವವುಳಿಸಿದ ಅದ್ಭುತ ಆಪ್ದ್ಬಾಂಧವ.
ಮನೆಯಲ್ಲೊಂದು ದೀಪವೇ ಹಚ್ಚದವರು ಇಲ್ಲಿ ಸಂಸ್ಕೃತಿಯ ಪಾಠ ಮಾಡುವರು,ಸಂಸ್ಕೃತಿ ಅಳಿಯುತ್ತಿದೆಯೆಂಬ ಹಲವು ಕೂಗಿನ ನಡುವೆ ತಮ್ಮದೇ ಆಚರಣೆ ಹಾಗು ಸಂಪ್ರದಾಯಗಳ ಬಗ್ಗೆ ಮೆಲ್ಲಗೊಂದು ಫೋಟೋ ಹಾಕಿ ಸುಸಂಸ್ಕೃತಿ ಮೆರೆಯುವ ಸಾಧುಜನರು. ಭಾಷೆಯ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲದ ಭಾಷಾಹೋರಾಟಗಾರರು. ಹಲವು ಭಾಷೆಗಳನ್ನು ತಿಳಿದು ಆಳವಾದ ಜ್ಞಾನವಿದ್ದರೂ ಎಲ್ಲರಿಗೊಂದು ಲೈಕ್ ಒತ್ತಿ ತೆಪ್ಪಿಗಿರುವವರು.
ಇಲ್ಲಿ ನಡೆವ ಜಗಳ ವಾಗ್ವಾದಕ್ಕೆ ಏನೂ ಅರಿಯದ ತಮ್ಮ ಮನೆಯವರ ಮೇಲೆ ಗದ್ದಲಮಾಡುವವರು. ಕಂಡ ಕಂಡ ಹೆಣ್ಮಕ್ಕಳಿಗೆ ಅಸಹ್ಯ ಮಾತಾಡಿ ಸಮಾಜದಲ್ಲಿ ಪ್ರತಿಷ್ಠಿತರೆನಿಸಿದ ಮಹಾಮಹಿಮರು.ಇನ್ನೆಲ್ಲೋ ಇರುವ ಭಾಷೆಗೆ ಮತ್ತೆಲ್ಲೋ ಇರುವ ಜನರ ಕಾಳಜಿ.ಎಲ್ಲವನ್ನೂ ಎಲ್ಲರನ್ನೂ ಗಮನಿಸಲು ಮಾಡಿಕೊಂಡ ಹತ್ತಿಪ್ಪತ್ತು ಮುಖವಿಲ್ಲದ ಮುಖ ಹೇಡಿ ಅಕೌಂಟ್ಗಳು.ಸ್ವಂತ ಹೆಸರು ಸ್ವಂತ ಭಾವಚಿತ್ರ ಹಾಕಲೂ ಹೆದರುವ ಮುಗ್ಧರು.ಸ್ವಂತ ಬರಹ ಬರೆಯದೆ ಅವರಿವರ ಬರಹ ಕದಿಯುವ ಕಳ್ಳಕಾಕರು. ಇನ್ಯಾರೋ ಬೆಂಬಲಿಸಿದರು ಇನ್ಯಾರೋ ವಿರೋಧಿಸಿದರೆಂದು ತಾವೂ ಕಣಕ್ಕಿಳಿವರು.

ಎಷ್ಟೋ ಹನಿಗವಿತೆಗಳ ಸಾಗರ,ಚಿಕ್ಕ ಕಥೆಗಳ ತವರು,ಇನ್ನು ಏನು ಹೇಳಲಿ ಈ ಟುವ್ವಿ ಲೋಕದ ಬಗ್ಗೆ. ಇದಿಷ್ಟು ಟ್ವಿಟರ್ ಕಥೆ ಇಷ್ಟವಾದರೆ ಒಂದು ಲೈಕ್ ಒತ್ತಿ.
Comments