ತಳಮಳ
- VinuVeda
- Jun 6, 2018
- 1 min read
Updated: Dec 19, 2021
ಮೋಸ
ಅವನ ಕಂಗಳಲ್ಲಿಯ ಆಹ್ವಾನಕ್ಕೆ ಜಗ್ಗಬೇಡ ಮರುಳೇ ಹೊಸಸದನವಲ್ಲ ಅವನೆದೆ ಗೂಡು ಅದೊಂದು ಬಾಡಿಗೆಯ ತಾವು ದಿನವೂ ಹೊಸನೀರು ಹರಿವ ತೋಡು
ಇದೊಂದು ಪ್ರೀತಿಯ ಸಾವು
ದೂರ
ಮತ್ತೆ ಬಾರದಂತೆ ದೂರ ಸರಿದು ಹಿಂತಿರುಗಿ ನೋಡಿದಾಗ ಕಳೆದ ದಿನಗಳ ನೆನಪಾಯ್ತು ಕಣ್ಣಂಚಲಿಳಿದ ಹನಿ ಒರೆಸಲು ಅವನ ಕೈಗಳಿಲ್ಲ
ಹುಸಿ ಮುನಿಸು
ಮಳೆ ಬಂದ ರಭಸಕ್ಕೆ ಮುನಿಸೆಲ್ಲ ಇಳಿದಿದೆ ಮರೆತೆ ಗೆಳೆಯ ನನ್ನ ಕೋಪಕ್ಕೆ ನೀ ಬಹುದೂರ ಕೊಚ್ಚಿ ಹೋಗಿರುವುದ... ಮಳೆ ಕೆಟ್ಟದ್ದೋ ಕೋಪ ಕೆಟ್ಟದ್ದೋ

ಮೀನು
ನೀರ ಮೇಲಿನ ಹೆಜ್ಹೆ ನಿನ್ನದು ಕನಸಲ್ಲಿ ಕಂಡ ನನಸು ನನ್ನದು ನೀ ಹೋದಲೆಲ್ಲ ನಾ ಬರುವೆ ನನ್ನ ಕನಸೆಲ್ಲಾ ನಿನಗಾಗಿ ಧಾರೆಯೆರೆವೆ... ಇದು ಜೀವನ ಇದುವೇ ಜೀವನ
ನನಸಾಗದ ಕನಸುಗಳಿಗೊಂದಿದೆ ಗಮ್ಮತ್ತು
ಕನಸಾಗಿರದ ನನಸುಗಳಿಗೆಲ್ಲಿದೆ ಕಿಮ್ಮತ್ತು

ಅಹಂ
ನನ್ನೊಳಿಪ್ಪ ನೀನು ನಿನ್ನೊಳಿಪ್ಪ ನಾನು
ನಾನು ನಿನ್ನೊಳೊಗೋ ನೀನು ನನ್ನೊಳಗೋ
ನಮ್ಮಿಬ್ಬರೊಳಗೆ ಇನ್ಯಾರೋ
ನಾನೆಂಬ ಅಹಂಕಾರದಲಿ ನೀನು
ನೀನೆಂಬ ತಾತ್ಸಾರದಲಿ ನಾನು
ನಾನು ನಿನ್ನೊಳಗೋ ನೀನು ನನ್ನೊಳಗೋ
ನಮ್ಮಿಬ್ಬರೊಳಗೆ ಇನ್ಯಾರೊ.
ತರಂಗ
ಪ್ರೀತಿಯೆಂಬುದು ಶಾಂತವಾದ ನೀರಲೊಮ್ಮೆ
ಅಲೆ ಎದ್ದಂತೆ ಕೆಲವರಿಗೆ ಏನೋ ತಳಮಳ
ಕೆಲವರಿಗೆ ತುಂಬಾ ಖುಷಿ

ಸ್ಥಿರತೆ
ನೀನಿಲ್ಲದೆ ನಾನಿಲ್ಲವೆಂದಿದ್ದ ನನಗೆ
ಎದೆಗೊದ್ದು ಹೋದೆ
ಎಲೆ ಮರುಳೆ ನೀನಿಲ್ಲದೇ ಹೊದಾಗ
ನನ್ನೊಳಗಿನ ನಾನು ನನಗೇ ಒದ್ದು ನಿಂತಿದ್ದೇನೆ
ನೀನಿಲ್ಲದ ನನಗೀಗ ನಾಳೆಗಳ ಪರಿವಿಲ್ಲ
ನಿನ್ನೆಗಳೊಂದು ಪಾಠವಷ್ಟೆ
✍🏻ವಿನುವೇದ
Comments